Pages

ಗಜಾಷ್ಟಕ

ಇದುವರೆಗೆ ಅಲಭ್ಯವಾಗಿರುವ ಗಜಾಷ್ಟಕವು ಬಹಳ ಚಿಕ್ಕ ಪುಸ್ತಕ. ಅದು ತನ್ನ ವಸ್ತುವಿಗಿಂತಲೂ ಹೆಚ್ಚಾಗಿ, ಚಾರಿತ್ರಿಕ ಹಾಗೂ ಛಂದಸ್ಸಿಗೆ ಕಾರಣಗಳಿಗಾಗಿ ಮುಖ್ಯವಾಗಿದೆ. ಗಜಶಾಸ್ತ್ರವು ಅನೆಗಳನ್ನು ಸಾಕುವುದಕ್ಕೆ ಮತ್ತು ರೋಗಗ್ರಸ್ತವಾದ ಆನೆಗಳಿಗೆ ಸರಿಯಾದ ಚಿಕಿತ್ಸೆಯನ್ನು ನೀಡುವುದಕ್ಕೆ ಸಂಬಂಧಿಸಿದ ವಿವರಗಳನ್ನು ನೀಡುವ ಕೃತಿ. ಗಜಾಷ್ಟಕವು, ಈ ಕಲೆಯನ್ನು ವಿವರಿಸುವ ಎಂಟು ಪದ್ಯಗಳನ್ನು ಒಳಗೊಂಡಿದೆ. ಈ ಕೃತಿಯನ್ನು ದಕ್ಷಿಣ ಕರ್ನಾಟಕದಲ್ಲಿ ರಾಜ್ಯಭಾರ ಮಾಡಿದ ಪಶ್ಚಿಮ ಗಂಗರ(‘ತಲಕಾಡು ಗಂಗರು’) ರಾಜವಂಶಕ್ಕೆ ಸೇರಿದ ಇಮ್ಮಡಿ ಶಿವಮಾರನು ಬರೆದನೆಂದು ಹೇಳಲಾಗಿದೆ. ಅವನು ಒಂಬತ್ತನೆಯ ಶತಮಾನದಲ್ಲಿ ರಾಜ್ಯಭಾರ ಮಾಡುತ್ತಿದ್ದನು. (ಕ್ರಿ.ಶ. 830) ಅವನು ವ್ಯಾಕರಣ, ನೀತಿಶಾಸ್ತ್ರ, ಬಿಲ್ವಿದ್ಯೆ, ಕಾವ್ಯ, ಗಜಶಾಸ್ತ್ರ, ಅಶ್ವಶಾಸ್ತ್ರ ಮುಂತಾದ ಜ್ಞಾನಶಾಖೆಗಳಲ್ಲಿ ಪರಿಣಿತನಾಗಿದ್ದನು. ಈ ಸಂಗತಿಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ಸಿಕ್ಕಿರುವ ಶಾಸನವು ಖಚಿತಪಡಿಸುತ್ತದೆ. ಶಿವಮೊಗ್ಗ ಜಿಲ್ಲೆಯ ಹುಮಚದಲ್ಲಿ ಸಿಕ್ಕಿರುವ ಪಂಚಬಸ್ತಿ ಶಿಲಾಶಾಸನದಲ್ಲಿ, ಶಿವಮಾರನ ಗಜಾಷ್ಟಕವು ಒನಕೆವಾಡು ಮತ್ತು ಓವನಿಗೆಗಳಷ್ಟೇ ಜನಪ್ರಿಯವಾಗಿತ್ತೆಂದು ಹೇಳುತ್ತದೆ. ಸಹಜವಾಗಿಯೇ, ಇವೆರಡೂ ಆಗಿನ ಕಾಲದಲ್ಲಿ ಜನಪ್ರಿಯವಾಗಿದ್ದ ಗೇಯಪ್ರಕಾರಗಳು. ಶಿವಮಾರನು ಗಜಮತ ಕಲ್ಪನ ಎಂಬ ಪುಸ್ತಕವನ್ನು ಸಂಸ್ಕೃತದಲ್ಲಿಯೂ ಸೇತುಬಂಧ ಎಂಬ ಕೃತಿಯನ್ನು ಪ್ರಾಕೃತದಲ್ಲಿಯೂ ಬರೆದಿರುವನೆಂದು ಹೇಳಲಾಗಿದೆ. ಅವು ಕೂಡ ಇನ್ನೂ ಸಿಕ್ಕಿಲ್ಲ.
          ಪ್ರಾಯಶಃ, ಗಜಾಷ್ಟಕವು ತ್ರಿಪದಿ ಛಂದಸ್ಸನು ಬಳಸಿರುವ ಕನ್ನಡದ ಮೊಟ್ಟಮೊದಲ ಕೃತಿ. ಹಾಗೆಯೇ ಅದು ಕನ್ನಡದ ಮೊದಲ ಅಷ್ಟಕವೂ ಆಗಿರಬಹುದು. ಗಜಾಷ್ಟಕದ ಸಂದರ್ಭದಲ್ಲಿಯೇ ಒನಕೆವಾಡು ಮತ್ತು ಓವನಿಗೆಗಳನ್ನು ಹೆಸರಿಸಿರುವುದರಿಂದ ಅವು ಏನಿಲ್ಲವೆಂದರೂ ಒಂಬತ್ತನೆಯ ಶತಮಾನದಷ್ಟು ಹಳೆಯವಾಗಿರಬೇಕು. ಇದು ಆ ಕಾಲದ ಜಾನಪದ ಛಂದೋರೂಪಗಳನ್ನು ಕುರಿತ ಹೊಳಹುಗಳನ್ನು ನಮಗೆ ನೀಡುತ್ತದೆ.

No comments:

Post a Comment